ಕವನಗಳು
ಕರಿಮೋಡ ಚದುರಿತ್ತು
ಉದಯರವಿಯ ಕಂಡು
ನಭಕೆ ಹೊನ್ನೆಳೆಯ ಚಿತ್ತಾರ
ಬಿಡಿಸಿದ್ದ ಭಾಸ್ಕರನು ಬಂದು
ಹಸಿರೊದ್ದು ಮಲಗಿದ್ದ
ಭೂತಾಯಿ ಮೈಮೇಲೆ
ಹೊನ್ನನೀರ ತುಳುಕಿಸಿ
ನಲಿಸಿತ್ತು ಭಾಸ್ಕರನ ಲೀಲೆ
ಬಿರಿಯಲವಣಿಸಿದ್ದ ಮೊಗ್ಗೆಲ್ಲ
ಹೂವಾಗಿ ಅರಳಿ ನಗುತಾ
ಪಸರಿಸೆಲ್ಲೆಡೆ ಸೌಗಂಧ
ಕೋರುತಿದೆ ದಿನಕರಗೆ ಸ್ವಾಗತಾ
ಶೈಲೂ....
ಯಾರೂ ಇಲ್ಲ ಕೊನೆಗೆ
ಜಗನ್ನಾಟಕ ಸೂತ್ರದಾರನ ಜೊತೆಗೆ
ಯಾರಿತ್ತ ಶಾಪವೋ ಕಾಣೆ
ಜೊಂಡಿನಿಂದಾಯ್ತೇ ಕೊನೆ
ಉಂಗುಷ್ಟ ದಲ್ಲಿತ್ತೇ ಪ್ರಾಣ
ಅರಿತು ಹೂಡಿದನೆ ಬೇಡ ಬಾಣ
ಅವತಾರಾಂತ್ಯದ ಕುರುಹೇನು.?
ಕೊನೆಗಾಣಿಪ ಪರಿ ಇದೇನು.?
ಅಗಣಿತ ಅಕ್ಷೋಹಿಣಿ ಬಳಗ
ಮೆಚ್ಚಿ ವರಿಸಿದ್ದ ನಾರೀಒಡ್ಡೋಲಗ
ಯಾರೊಬ್ಬರೊಬ್ಬರೂ ಕಾಯದೇ
ಅಳಿವಿನಂಚಲಿ ನಿಂತಿತೇ ವಂಶವೇ
ಜಗನ್ನಾಟಕ ಸೂತ್ರದಾರ
ಆಡಿಸಿದ್ದೆ ಆಟ ನಿನ್ನನುಸಾರ
ತಂತ್ರ ಒಳತಂತ್ರಗಳ ರಣಸೂತ್ರ
ಧರ್ಮೋದ್ಧಾರಕೆ ನಿನ್ನೀಪಾತ್ರ
ಕೊನೆಯಂಕದ ಪರದೆಯಿದೇನು.?
ಇಂತೀ ನಿರ್ಗಮನ ಸರಿಯೇನು.?
ಅವತಾರದ ಕಾರ್ಯ ಮುಗಿದಿತ್ತೇ.?
ಕಡೆಗಾಣಿಸಿದವರ ಬಗ್ಗೆ ನೋವಿತ್ತೇ ?
ಶೈಲೂ.....
ಯಶೋಗಾಥೆ
************
ಕಂಡ ಕನಸಿನ ಸಾಕಾರ
ದುಡಿಮೆಯೇ ಅದರಾಧಾರ
ಕನಸು ನನಸಾಗಿಸಲು ಬೇಕು
ಪರಿಶ್ರಮವೆಂಬ ಬೆಳಕು
ಆಂತರ್ಯದಲಿ ಹಚ್ಚಿಡಬೇಕು
ಇಚ್ಛಾಶಕ್ತಿಯ ನಂದಾದೀಪ
ಬೆಳಕಾದೀತು ಬದುಕ ಹಾದಿ
ಕೈಹಿಡಿದು ನಡೆಸುವ ದಾರಿದೀಪ
ನಮ್ಮೊಳಿತಿಗೆ ನಮಗೆ ನಾವೇ
ಆಗಬೇಕು ಚೈತನ್ಯ ಚಿಲುಮೆ
ಮೊಳಗುತ್ತಿರಬೇಕು ಒಳಗೆ
ಗೆದ್ದೇ ಗೆಲ್ಲುತ್ತೇನೆಂಬ ಹಿರಿಮೆ
ಬದುಕೊಂದು ಚಕ್ರವ್ಯೂಹ
ಬೇಧಿಸಲಿರಬೇಕು ಉತ್ಸಾಹ
ಅರಿಷಡ್ವರ್ಗಗಳೇ ವೈರಿ
ಮಣಿಸಿ ಸೇರಬೇಕು ಗುರಿ
ಉತ್ಸಾಹ ಪ್ರೋತ್ಸಾಹಗಳ
ತುಂಬುತ್ತಾ ಆಂತರ್ಯಕೆ
ಗೆಲ್ಲಲನುವಾಗಬೇಕು
ದಮನಿಸುತ್ತ ಅತಿಯಾಸೆ ಬಯಕೆ
ಪ್ರೀತಿವಿಶ್ವಾಸಗಳ ಹಾದಿ
ಇಳೆಯನಾಳುವ ಗಾದಿ
ಸಹಿಸಿ ಕಷ್ಟಕೋಟಲೆಯ
ಸಾಧಿಸಬೇಕು ವಿಜಯ
ತುಡಿತವಿರಬೇಕು ಗಮ್ಯದೆಡೆಗೆ
ಮಿಡಿತವಿರಬೇಕು ಗೆಲುವ ಕಡೆಗೆ
ತೊಡಕನೊಡೆಯಲಿ ಜ್ಞಾನದೀಪಿಕೆ
ಎತ್ತರಕ್ಕೇರಲಿ ದಿಗ್ವಿಜಯದ ಪತಾಕೆ
ಶೈಲೂ.....
: ಜ್ಞಾನ ದೀವಿಗೆ
************
ಹಚ್ಚಿದೆ ದೀಪ
ಅಜ್ಞಾನದ ಸುತ್ತ
ಬೆಳಗಿತು ಬಾಳು
ಜ್ಞಾನ ನೀಡುತ್ತಾ
ಚೈತನ್ಯವಿತ್ತು ಮನಕೆ
ಬೆಳಗಿದೆ ಜ್ಞಾನದೀವಿಗೆ
ವಿಷಯಾವಲೋಕನ
ಬೌದ್ಧಿಕ ಬೆಳವಣಿಗೆ
ಆಕರ ಗ್ರಂಥವಿದು
ಬುದ್ಧಿಮತ್ತೆ ಬೆಳೆಸುತ್ತ
ಜ್ಞಾನಾಂಕುರದ ಪ್ರಭೆಯಿದು
ಅಜ್ಞಾನ ಓಡಿಸುವತ್ತ
ಕೋಶ ಓದಬೇಕು
ದೇಶ ಸುತ್ತಬೇಕು
ನೋಡಿ ಕಲಿಯಬೇಕು
ಮಾಡಿ ತಿಳಿಯಬೇಕು
ಅಂಧಕಾರವನಳಿಸಿ
ಜ್ಞಾನಾಗ್ನಿಯ ಪ್ರಜ್ವಲಿಸಿ
ಬೆಳಕು ನೀಡುವ ಹೊತ್ತಿಗೆ..
ಇದೇ ಜ್ಞಾನ ದೀವಿಗೆ...
ಶೈಲಜಾ ರಮೇಶ್.....
: ಸಂದಿಗ್ಧ
*******
ಮನಸಿನಲ್ಲಿ ಅಡಗಿಸಲಾರದ
ಯಾರೊಂದಿಗೂ ಹೇಳಲಾರದ
ಸೋಲು ಹಾತಾಶೆಗಳಿವೆಯಲ್ಲಾ
ಕುಗ್ಗಿಸಿ ಬಿಡುತ್ತವೆ ಮನುಜನನ್ನು..
ಮನಸ್ಸಿಗೆ ಚಿಂತೆಯ ಹಚ್ಚಿ
ಚಿತೆಯೇರುವಂತೆ ಮಾಡುವ
ಹಿಂಸಿಸುವ ನೋವುಗಳಿವೆಯಲ್ಲಾ
ಜಗ್ಗಿಸಿಬಿಡುತ್ತದೆ ಮನುಜನನ್ನು...
ಕಣ್ಣಂಚಿನಲ್ಲಿ ತುಳುಕಲಾರದೆ
ಒಡಲೊಳಗದುಮಿಡಲಾರದೆ
ಕಾಡುವ ಶೋಕವಿದೆಯಲ್ಲಾ
ತಗ್ಗಿಸಿಬಿಡುತ್ತದೆ ಮನುಜನನ್ನು...
ಬಿಚ್ಚಿಡಲಾರದಂತೆ ಹಿಂಸಿಸುವ
ಮುಚ್ಚಿಡಲಾರದಂತೆ ಕಾಡುವ
ಕೆಲವೊಂದು ಸಂಗತಿಗಳಿವೆಯೆಲ್ಲಾ
ಒಳಗೊಳಗೇ ಕೊಲ್ಲುತ್ತದೆ ಮನುಜನನ್ನು...
ಆಂತರ್ಯದ ನೋವ ಜ್ವಾಲೆ
ಅಂತರ್ಗಾಮಿನಿಯ ಒಳಹರಿವಿನಂತೆ
ಉಸುಕಿನೊಳಗಣ ಸುಡುವ ಬಿಸಿಯಂತೆ
ಒಳಗೊಳಗೇ ದಹಿಸಿ ನರಳಿಸುತ್ತದೆ ಮನುಜನನ್ನು....
ಶೈಲೂ.......
ಮಾತಿಗಿಂತ
ಮೌನವೇ ಲೇಸು ಸಖ...
ಮಾತನಾಡುವ ಸಮಯ
ಕಣ್ಣಲ್ಲಿ ಕಣ್ಣಿಟ್ಟು
ನೋಡಲೆನೋ
ಮುಜುಗರ ನಿನ್ನ ಮುಖ....
ಶೈಲೂ.....
ಬಿಡಿ ...ಕೈ ಬೇಗ
*************
ಬಿಡಿ ...ಕೈ ಬೇಗ ಹೋಗಲಿದೆ
ನಿಮ್ಮೀಹಿಡಿತ ಮನ ನಾಚಿಸಿದೆ
ದಾರಿಗಡ್ಡ ಬರುವುದು ಸರಿಯೇ
ಇದು ತಕ್ಕುದೇ ಘನತೆ ನಿಮಗೆ ದೊರೆಯೇ
ನಾನೋ ಪರ್ಣಕುಟಿಯ ಮುನಿಯ ಸುತೆ
ಇದೇನು ಭುವನವಾಳುವ ದೊರೆಯ ನೀತಿ ಸಂಹಿತೆ?
ತೋಳ್ಹಿಡಿದು ತಡೆಗಟ್ಟುವುದು ನಗರ ಸಂಸ್ಕೃತಿಯೇ.?
ಗಲಿಬಿಲಿಸಿ ಮುಜುಗರಕ್ಕೀಡು ಮಾಡುವುದು ಸರಿಯೇ?
ನೋಡಾರು ಯಾರಾದರೂ ಋಷ್ಯಾಶ್ರಮದ ಮಂದಿ
ಜಿಹ್ವೆಗಾಹಾರವಾದೀತೆಲ್ಲರಿಗೂ ಇದೇ ಸುದ್ದಿ
ಕಂಕುಳಲ್ಲಿದೆ ಹೊತ್ತ ಕೊಡದ ನೀರ ಭಾರ
ಜಾರುವ ಭಯ ಹಾಳಾದ ಪ್ರಾಯ ಬಲುಭಾರ
ಹಾದಿ ಸಮಾಗಮ ಸ್ವೇಚ್ಛೆ ಸರಿಯಲ್ಲ
ಹೆತ್ತವರ ಸಹಮತಿಯ ಇಚ್ಛೆಗೆ ಸಮನಿಲ್ಲ
ಸಮ್ಮತಿಯಿದೆ ಹೆತ್ತವರ ಹರಕೆಯ ನುಡಿಗೆ
ಪಡೆಯಿವರನುಮತಿ ಚಂದದ ಸಹಬಾಳ್ವೆಗೆ
ಹರಡಿದೆ ಚಂದ್ರಮನ ಶೀತಲ ಚಂದ್ರಿಕೆ
ತನುಮನವೆಲ್ಲ ಅರಳಿ ಜಾರಿದೆ ಮನ ಉಲ್ಲಾಸಕೆ
ಇಂತೀಸಮಯ ಸಲ್ಲದು ಏಕಾಂತಕೆ
ಬಿಡಿ..ದೊರೆಯೇ.. ಹೋಗಲಿದೆ ಕುಟೀರಕೆ...
ಶೈಲೂ.....
ಪರವಶ
*********
ಪ್ರೀತಿ ಸಾಂಗತ್ಯದಲಿ ಪರವಶ
ಅತೀವ ಪ್ರೇಮದಲೆಯ ಪ್ರಕಾಶ
ಜಗವನ್ನೇ ಮರೆಸುವ ಅತೀವ.ಸುಖ
ನಿನ್ನೀ ತೋಳಬಂದನದಲ್ಲಿದೆ ಸಖ
ಬೇಕಿಲ್ಲ ಕಷ್ಟ ಕೋಟಲೆಗಳ ಗೊಡವೆ
ಜಗವ ಮರೆಸುವ ಪ್ರೀತಿಯೇ ಒಡವೆ
ಮಧುರ ಬಾಂಧವ್ಯಕೆ ಹರಿವ ಜಲದ ಹಿಮ್ಮೇಳ
ನುಡಿಸುತಿದೆ ಹೃದಯ ಲಯಬದ್ದ ತಾಳ
ಹರಿಯಲಿ ಹೊಳೆಯಲ್ಲಿ ಸಂಕಷ್ಟಗಳ ಸರಮಾಲೆ
ಕನಸುಗಳ ಸಾಕಾರವದುವೆ ಸುಗಂಧ ಹೂಮಾಲೆ
ಮನದಂಗಳಲಿ ನಿನ್ನೊಲುಮೆಯ ಬೆಳದಿಂಗಳು
ಪಸರಿಸೆಲ್ಲೆಡೆ ಶಾಂತಿ ರಾರಾಜಿಸುತ್ತಿದೆ ಬೆಳಕು
ಶೈಲೂ......
#ಹೇಗಿತ್ತು_ಗೊತ್ತಾ_ನನ್ನೂರು.?
ಸದಾ ಹಸಿರೇ ತುಂಬಿದ್ದ ಊರು
ಎತ್ತ ನೋಡಿದರತ್ತ ತೋಟಗಳ ಕಾರುಬಾರು
ಗಗನಚುಂಬಿ ಮರಗಿಡಗಳ ತವರು
ಹೇಗಿತ್ತು ಗೊತ್ತಾ ನನ್ನೂರು..!
ಅವಿದ್ಯಾವಂತರೆ ಇಲ್ಲದ ಊರು
ನನ್ನೂರು ಸಾಕ್ಷರತೆಗೆ ಹೆಸರು
ಪ್ರತೀ ಮನೆಗೊಂದು ಸರ್ಕಾರಿ ಹುದ್ದೆ
ಬೆವರುಸುರಿಸಲಿಹುದು ಹೊಲಗದ್ದೆ
ನಾಗರೀಕತೆಗೆ ಇನ್ನೊಂದು ಹೆಸರು
ಸೇವಾ ಮನೋಭಾವವೆಲ್ಲರ ಉಸಿರು
ಅತಿಥಿ ಸತ್ಕಾರದಲಿ ಎತ್ತಿದಕೈ ನಮ್ಮೂರು
ವಿದ್ಯಾವಂತ, ಕಲಾವಿದರ ತವರು
ಈಗೀಗ ಅಲ್ಲಲ್ಲಿ ತಲೆಯೆತ್ತಿದೆ ರಾಜಕೀಯ
ಅಳಿಸದಿರಲೆಂದಿಗೂ ಮಾನವೀಯತೆಯ
ಹೆಸರಾದ ಊರಿಗೆ ಕಪ್ಪುಚುಕ್ಕಿ ಮೆತ್ತದಿರಲಿ
ಎಲ್ಲ ದುಷ್ಟ ಸಹವಾಸದಿಂದ ದೂರವಿರಲಿ
✍️ಡಾ: B.N ಶೈಲಜಾ ರಮೇಶ್
(ಶೈಲೂ..)
Comments
Post a Comment