ರಾಧಾಂತರಂಗ
ರಾಧಾಂತರಂಗ
**************
ಎಲ್ಲೆಲ್ಲಿ ನೋಡಿದರೂ ಕೃಷ್ಣ
ನಿನ್ನ ನೆನಪಿನದೇ ಸಾಕಾರ
ದೃಷ್ಟಿ ಹಾಯಿಸಿದೆಡೆಯೆಲ್ಲಾ
ನಿನ್ನ ಆಕಾರ ನಿರಾಕಾರ..!!
ಬೀಸು ಗಾಳಿಯ ರವದಲಿ
ಅನುರಣಿತ ನಿನ್ನುಸಿರ ಸೌಗಂಧ
ಅರಳು ಮಲ್ಲಿಗೆ ದಳದೊಳಗೆ
ಕಂಡೆ ನಿನ್ನ ವದನದ ಚಂದ..!!
ಕಾರ್ಮುಗಿಲ ಕಂಡೊಡನೆ
ಚಿತ್ತ ನಿನ್ನಲೇ ಮಿಳಿತ
ನೀಲ ಮೇಘದ ವರ್ಣ
ಸಾರುವುದು ನಿನ್ನ ಚರಿತ..!!
ಸೂರ್ಯನುದಯದಿ ಕಂಡೆ
ನಿನ್ನ ಕಣ್ಣ ಮಿಂಚಿನ ಕಾಂತಿ
ಬಾನ ಚಂದ್ರಮನಲೂ ಇಹುದು
ನಿನ್ನ ನಗುಮೊಗದ ಬ್ರಾಂತಿ..!!
ಹಸಿರು ಹಾಸಿನ ನೆಲದೆ
ನೀನಿಟ್ಟ ಹೆಜ್ಜೆಯ ಗುರುತು
ಗೋವಿನ ಕಿರುಗಂಟೆ ಸದ್ದಲಿ
ಕುಳಿತೆ ಜಗವನೆ ಮರೆತು..!!
ಯಮುನೆಯ ಜುಳು ಜುಳು ನಾದ
ತರುತಿದೆ ವೇಣುಗಾನದ ನೆನಪು
ಬಳುಕುವ ಮಯೂರಿಯಲೂ
ನಿನ್ನ ನಾಟ್ಯದ ಒನಪು..!!
ಗಿರಿವನದ ಬಿರುಗಾಳಿಯಲಿ
ನಿನ್ನ ಮುನಿಸಿನ ಅಂದ
ತಂಗಾಳಿ ಮಾರ್ದನಿಸುವುದು
ಮುರಳಿ ಗಾನದ ಚಂದ..!!
ಪ್ರತಿದಿನ ಪ್ರತಿ ಕ್ಷಣ ಕ್ಷಣವೂ
ನಿನ್ನ ನಾಮದ ಸ್ಮರಣೆ
ಹಗಲಿರುಳು ಮಾಧವಾ
ನಿನ್ನ ನೆನಪಲ್ಲೇ ಜಾಗರಣೆ..!!
ಕೇಳಿಸದೇ ಒಳಮನದ ಕೂಗು
ಹೇಳು ನೀನೆಂದು ಬರುವೆ
ನಿನ್ನೆಡೆಗೆ ಸದಾ ತುಡಿತ
ಬರುವಿಗಾಗೇ ಕಾದಿರುವೆ..!!
ಶೈಲೂ.......
Comments
Post a Comment