ಸ್ವ - ಆತ್ಮಾವಲೋಕನ

ದೃಶ್ಯ ಕಾವ್ಯ##

ಸ್ವ - ಆತ್ಮಾವಲೋಕನ
******************
ಮೊದಲು ನಿನ್ನ ನೀನು ಅರಿ
ಎಲ್ಲರ ದೂಷಿಸುವುದೇನು ಸರಿ?
ತಿಳಿ ಮೊದಲು ನಿನ್ನ ಚಿತ್ತ
ಚಿತ್ತದೊಳಗಿರುವ ಮೊತ್ತ

ಅಳೆದು ತೂಗು ನಿನ್ನಾಂತರ್ಯ
ಓದಿ ತಿಳಿಯದರ ತಾತ್ಪರ್ಯ
ಅರಿವಿನರಿವಿರಲಿ ಬಾಳಲ್ಲಿ
ಹಿರಿಯರಾಣತಿಗೆ ಬೆಲೆಯಿರಲಿ

ಸುತ್ತಿ ಬಾ ಒಮ್ಮೆ ಮನದೊಳಗೆ
ಬೀಳದಿರು ಅರಿಷಡ್ವರ್ಗದೊಳಗೆ
ಹಸನಾಗಿರಲಿ ಮನೋಮಂದಿರ
ಬಿಟ್ಟರವಗುಣಗಳ ಬಾಳು ಸುಂದರ

ಶೋಧನೆಗಿಡು ಅಂತರಂಗವ
ನೋಯಿಸದಿರಾರ ಮನವ
ಅವರವರ ಭಾವಕ್ಕವರನುಭೂತಿ
ಮನ್ನಣೆಯಿರಲಿ ಸರ್ವರಲಿ ಅದೇ ನೀತಿ

ಇಷ್ಟವಾಗದವರನತ್ತ ಸರಿಸಿಬಿಡು
ಆಪ್ತೇಷ್ಟರಲಿ ಶುದ್ಧ ನಂಬಿಕೆಯಿಡು
ತಿಳಿ ನೀ ಇರುವುದೊಂದೆ ಬಾಳು
ನಾನೆಂಬ ಅಹಂಇದ್ದರೆ ಬಾಳು ಹಾಳು

ಎಲ್ಲರೊಳಗೊಂದಾಗಿ ಬೆರೆ ನೀ
ಎಲ್ಲ ನಿನ್ನವರೇ ಮರುಳೇ ತಿಳಿ ನೀ
ಮಾಡೋಮ್ಮೆ ಸ್ವ ಆತ್ಮಾವಲೋಕನ
ಸರಿ ತಪ್ಪೋಪ್ಪುಗಳೊಡನೆ ಮಂಥನ

ಮಥಿಸಿ ಮಥಿಸಿ ನವನೀತವಾಗು
ಎಲ್ಲರಿಗಾತ್ಮ ಪ್ರಿಯಬಂಧುವಾಗು
ಬರೆ ಸ್ನೇಹಸಂಬಂಧಕೆ ಮುನ್ನುಡಿ
ಶುದ್ಧಾತ್ಮ ಪ್ರಭೆಯ ಪ್ರತಿಫಲಿಸೋ ಕನ್ನಡಿ

             ಶೈಲೂ.......

Comments

Popular posts from this blog

197 ತವರ ಸೆಳೆತ

330 ನಾ ಕಂಡ ಕನಸು

219 ಕದನ