ಬೇಡಿಕೆ

ಸಹೃದಯಜೀವ, ಕೃಷ್ಣಭಕ್ತೆ,  ವಾಣಿ T. K ಮೇಡಂ ರವರ ಕವನದಿಂದ ಪ್ರೇರಿತ
ಧನ್ಯವಾದಗಳು ಮೇಡಂ🙏🙏

ಬೇಡಿಕೆ
******
ಕಂದ ನೀನೆಂದು
ಮುದ್ದಾಡಿದಾಕ್ಷಣ
ಪುಟ್ಟ ಹೆಜ್ಜೆಯನಿಟ್ಟು
ಮುದ್ದುಗರೆವುತ ಬಂದು
ಮಡಿಲ ತುಂಬಿದ 
ಹಸುಮಗುವು ನೀನು

ಓರಗೆಯ ಗೆಳೆಯನೆಂದು
ಕೂಡಾಡಿ ನಲಿದೊಡೆ
ಅತೀವ ಆನಂದದ
ಕಡಲಲ್ಲಿ ಮುಳುಗಿಸಿ
ಅಮಿತೋತ್ಸಾಹ
ಬಾಳಲ್ಲಿ ತಂದವನು ನೀನು

ಬಂಧುವೆನ್ನುತ 
ನಿನ್ನ ಭಾವದಿಂ
ಅಪ್ಪಿದೊಡೆ, ಸಕಲ
ದುಗುಡದುಃಖ ಸರಿಸಿ
ಸುಖದ ನೆಲೆಯಲಿ
ತೇಲಾಡಿಸಿದವ ನೀನು

ಸಖ ನೀನೆಂದು
ಸಕಲವ ನಿನ್ನ
ಹೃದಯಪದ್ಮದೊಲಿರಿಸೆ
ಬಿಗಿದಪ್ಪಿ ಸಂತೈಸಿ
ಪ್ರೇಮಾಮೃತವ
ಧಾರೆಯೆರೆದವನು ನೀನು

ದೇವರದೇವ ನೀನೆಂದು
ಭಾವ ಭಕ್ತಿಯಲಿ ಮಿಂದು
ಅನವರತ ನಿನ್ನನ್ನೇ
ಆಸ್ಥೆಯಲಿ ಸ್ತುತಿಸುತ್ತ
ಶರಣಾಗತಳಾಗೆ
ಉದ್ಧರಿಸಿದವ ನೀನು

ಬೇಡದೆ ಎಲ್ಲವನಿತ್ತೆ
ಸಿರಿ ಸಂಪದವನಿತ್ತೆ
ನಿನ್ನ ಕರುಣೆಯ ಕೃಪೆಗೆ
ಪಾತ್ರಳಾದೇನು ತಂದೆ
ಕೊರಗೊಂದುಳಿದಿಹುದು
ಜ್ಞಾನ ಭಕ್ತಿ ವಿವೇಕ 
ವೈರಾಗ್ಯನೀಡೆನಗೆ ತಂದೆ

            ಶೈಲೂ......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ