180 ಶ್ರೀ ರಾಮ ಕಥನ
**************
ಇದು ಶ್ರೀರಾಮನ ಪುಣ್ಯ ಕಥನ
ನೆನೆದರೆ ಜೀವನ ಪಾವನ
ಪುರುಷೋತ್ತಮನ ಆದರ್ಶ ಚರಿತೆಯ
ನೆನೆಯಲು ಬಾಳದು ಧನ್ಯ||
ಹುಟ್ಟಿನಿಂದಲೇ ರಾವಣ ತಾನು
ಸೊಕ್ಕಿ ಮೆರೆದು ಜಗವನು ಕಾಡಲು
ತಕ್ಕ ಶಿಕ್ಷೆ ಯ ಮಾಡಲೊಸುಗ
ರಘುಪತಿ ತಾನವತರಿಸಿದನಮ್ಮ .||
ಮಕ್ಕಳಿಲ್ಲದ ದಶರಥ ತಾನು
ಪುತ್ರಕಾಮೇಷ್ಠಿ ಯಾಗವ ಮಾಡಲು
ಮೆಚ್ಚಿ ಆವಿರ್ಭವಿಸಿದ ಅಗ್ನಿ ದೇವ
ಪಾಯಸವ ತಾ ನಿತ್ತನಮ್ಮ ||
ಯಜ್ಞಪುರುಷನ ತೃಪ್ತಿಯ ಹರಕೆಗೆ
ಚಂದಿರನಂಥ ಅಂದದ ಮೊಗದ
ಮುದ್ದಿನ ಮಕ್ಕಳು ನಾಲ್ವರು
ದಶರಥನ ಸತಿಯರಿಗೆ ಜನಿಸಿದರಮ್ಮ.||
ರಾಘವ ಉತ್ತಮನಾಗಿ ಬೆಳೆದು
ಹೋಗಿ ಮುನಿಗಳ ಯಾಗವ ರಕ್ಷಿಸಿ
ಹರಿಸಿ ತಾ ಅಹಲ್ಯೆಯ ಶಾಪವಾ
ದುಷ್ಟ ರಕ್ಕಸರ ಮಣಿಸಿದನಮ್ಮ. ||
ಜನಕರಾಜನ ಕುವರಿ ಸೀತೆಯ
ಸ್ವಯಂವರದೆ ಜಯಿಸಲೋಸುಗ
ಶಿವಧನುವನು ಮುರಿದು ಸೀತೆಯ ಗೆದ್ದು
ಸಕಲರ ಸಮ್ಮುಖದಿ ವರಿಸಿದನಮ್ಮ||
ಪಟ್ಟಾಭಿಷೇಕದ ಸಂಭ್ರಮದಲಿರಲು
ದುಷ್ಟಕೂಟದ ಕುತಂತ್ರಕೆ ಮಣಿದು
ಪಿತೃವಾಕ್ಯವನು ಪಾಲಿಸಲೆಂದು
ಸತಿ,ಸೋದರನೊಂದಿಗೆ ವನವಾಸಕೆ ತೆರಳಿದನಮ್ಮ ||
ಶಿಷ್ಟ ರಕ್ಷಣೆಯ ಭಾರವನೊತ್ತು
ದುಷ್ಟ ರಕ್ಕಸರ ಹೆಡೆಮುರಿ ಕಟ್ಟಿ
ಕ್ಷಾತ್ರತೇಜಸ್ಸಿನಿಂದೊಳೆಯುವ ಧೀರ
ಋಷಿಮುನಿಗಳ ಸೇವೆಯ ಮಾಡಿದನಮ್ಮ ||
ಮಾಯಾ ಜಿಂಕೆಯ ಮೋಹಕೆ ಬಿದ್ದ
ಮೆಚ್ಚಿನ ಮಡದಿಯ ಆಸೆಯ ನುಡಿಗೆ
ಮರೀಚಿಕೆ ಮಾಯೆಯ ಬೆನ್ನಟ್ಟಿ
ದುಷ್ಟ ಮಾರೀಚನ ಸಂಹರಿಸಿದನಮ್ಮ ||
ಮುನಿವೇಷದಿ ಬಂದ ರಾವಣ ತಾನು
ಭಿಕ್ಷೆ ಯ ಬೇಡುವ ನೆಪದಲಿ ನಿಂದು
ಸಹಜ ರೂಪವತಿ ಕರುಣೆಯ ಮೂರ್ತಿ
ಮಾತೇ ಜಾನಕಿಯ ಅಪಹರಿಸಿದನಮ್ಮ ||
ಸುಗ್ರೀವ ನ ಸಖ್ಯವ ಬೆಳೆಸಿ
ಭಕ್ತ ಅಂಜನಾತನಯನ ಕಳಿಸಿ
ದುಷ್ಟ ರಾವಣನ ನೆಲೆಯನು ಅರಿತು
ವಿಜಯಯಾತ್ರೆಗೆ ಹೊರಟಿಹನಮ್ಮ ||
ಕಪಿಗಳ ನೆರವಲಿ ಲಂಕಾನಗರಿಗೆ
ಸೇತು ಬಂಧವ ಬೆಸೆದು ಸಾಗರದಾಟಿ
ದಶಕಂಠ ರಾವಣನ ಶಿರಗಳ ಛೇದಿಸಿ
ಲೋಕಮಾತೆಯ ಸೆರೆ ಬಿಡಿಸಿದನಮ್ಮ||
ಮರಳಿ ಅಯೋಧ್ಯೆಗೆ ಪಾದವಬೆಳಿಸಿ
ಧರ್ಮದಿಂದಲಿ ರಾಜ್ಯವನಾಳುತ
ರಾಮರಾಜ್ಯದ ಕನಸು ನನಸಾಗಿಸುತ
ಮರ್ಯಾದಾಪುರುಷೋತ್ತಮ ಎನಿಸಿದನಮ್ಮ. ||
ಶೈಲೂ......
Comments
Post a Comment