147. ಹಚ್ಚಿ ಬೆಳಗೊಣ ಪ್ರಣತಿ

ಸಲ್ಲದ ಆಚಾರ ವಿಚಾರಗಳ ಹಿನ್ನೆಲೆಯಲ್ಲಿ😊
ಬೆಳಗೋಣ ಪ್ರಣತಿ
****************
ಹಚ್ಚಿ ಬೆಳಗೊಣ
ಶುದ್ಧ ಸಂಸ್ಕಾರಗಳ
ಸಾಲುದೀಪ
ಬೆಳಗಿ ಉರಿಯಲಿ
ಭವ್ಯ ಸಂಸ್ಕೃತಿಯ
ಸೊಡರು ದೀಪ..

ಬುವಿಯಲೆಲ್ಲೆಲ್ಲ
ಬೆಳಗುತಿಹುದು
ಸದಾಚಾರದ ಜ್ಯೋತಿ
ಬೇಕೇತಕೆ ನಮಗೆ
ಸಲ್ಲದ ನಡತೆಗಳಿಗೆ
ಮಮಕಾರ ಪ್ರೀತಿ..

ಕಲ್ಲುಕಲ್ಲಿನಲೂ
ದೇವರ ಕಾಣುವುದು
ನಮ್ಮ ಸಂಸ್ಕೃತಿ
ಕಲ್ಲಿನಲ್ಲಿ ಪೆಟ್ಟು
ದೇವದೂತನಿಗೂ
ಅದು ಬೇಡದ ವಿಕೃತಿ..

ದೈವದಸ್ತಿತ್ವವನೇ
ನಿರಾಕರಿಸುವುದು
ನಾಸ್ತಿಕ ಅಹಂಭಾವ
ಅಣುಅಣುವಿನಲೂ
ಅವನ ಭಾವಿಸುವುದು
ಆಸ್ತಿಕ ಮನೋಭಾವ

ಬದುಕ ಮೌಲ್ಯವನೆ
ತೂರಿಗಾಳಿಗೆ ಕೆಲ
ಪರಿತಪಿಸುವ ಮಂದಿ
ಮೌಲ್ಯಯುತ ಬಾಳ್ವೆ
ಬೆಸೆದು ಸೇತುವೆ ನಾವ್
ಅಪ್ಪಿ ನಲಿವ ಮಂದಿ..

ದಯೆಯಿರಬೇಕು
ಸಕಲ ಪ್ರಾಣಿಗಳಲಿ
ದಯವೇ ಧರ್ಮವಯ್ಯಾ
ಏಳಿ ಎದ್ದೇಳಿ, ನಿಲ್ಲದಿರಿ
ಗುರಿ ಸೇರುವವರೆಗೂ
ಇದು ವಿವೇಕವಾಣಿಯಯ್ಯಾ

ಸೂರ್ಯನುದಿಸುವ
ಪೂರ್ವ ದಿಶೆಯಲ್ಲಿ
ಸಕಲವೂ ಅಡಗಿ ಕುಳಿತು
ಅಸ್ತಮಿಸುವ
ದಿಶೆಯಲ್ಲಿ ಇಹುದು
ನೋವು ನಲಿವು ದಣಿವು

ಪ್ರೀತಿ ನೆರಳಲ್ಲಿ
ಅರಳಿ ಬೆಳೆಯಬೇಕು
ಅಚಾರವಿಚಾರಗಳ ಬೆಳೆ
ಸಂಸ್ಕೃತಿ ಸಂಸ್ಕಾರವ
ಪ್ರತಿಬಿಂಬಿಸಿ ಪೋಷಿಸಿ
ತುಂಬೋಣ ಆಚಾರಕೆ ಜೀವಕಳೆ

          ಶೈಲೂ

Comments

Popular posts from this blog

343 ಒಗಟಿನ ರೂಪದ.ಚುಟುಕು

ಕವನ ಸಂಗ್ರಹ

ಕವನ